ವಿಜ್ಞಾನ - 
	ವಿಜ್ಞಾನ ವಿಷಯಗಳಿಗೇ ಮೀಸಲಾಗಿದ್ದ ಪ್ರಥಮ ಕನ್ನಡ ಮಾಸಪತ್ರಿಕೆ. ಬೆಂಗಳೂರಿನ ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ 1917ರಲ್ಲಿ ಪತ್ರಿಕೆಯನ್ನು ಆರಂಭಿಸಿತು. ಸಮಿತಿಯ ಸಂಸ್ಥಾಪಕರೂ ಸೆಂಟ್ರಲ್ ಕಾಲೇಜಿನ ಭೌತವಿಜ್ಞಾನದ ಪ್ರಾಧ್ಯಾಪಕರೂ ಆಗಿದ್ದ ಬೆಳ್ಳಾವೆ ವೆಂಕಟನಾರಣಪ್ಪನವರೂ(1871-1943) ಮತ್ತು ಆಗಿನ ಮೈಸೂರು ಸರಕಾರದ ಪವನಶಾಸ್ತ್ರ ವೀಕ್ಷಣಾಲಯದ ಮುಖ್ಯಸ್ಥರಾಗಿದ್ದ ನಂಗಪುರಂ ವೆಂಕಟೇಶ ಅಯ್ಯಂಗಾರ್ಯರೂ ಈ ಪತ್ರಿಕೆಯ ಸಂಪಾದಕರಾಗಿದ್ದರು.

	ಡಿಮೈ (1/8) ಆಕಾರದಲ್ಲಿರುತ್ತಿದ್ದ ಈ ಪತ್ರಿಕೆಯಲ್ಲಿ 30-40 ಪುಟಗಳಿರುತ್ತಿದ್ದುವು. ಪ್ರತಿ ಸಂಚಿಕೆಯಲ್ಲಿ ಮೂರುನಾಲ್ಕು ವಿಜ್ಞಾನ ಲೇಖನಗಳಿರುತ್ತಿದ್ದುವು. ಜೊತೆಗೆ ವಿವಿಧ ವಿಜ್ಞಾನ ವಿಷಯ ಸಂಗ್ರಹ ಎಂಬ ಶೀರ್ಷಿಕೆಯಲ್ಲಿ ವಿಜ್ಞಾನದ ಪ್ರಗತಿಯನ್ನು ಕುರಿತ ಸುದ್ದಿಗಳನ್ನು ನೇಚರ್, ಸೈಂಟಿಫಿಕ್ ಅಮೆರಿಕನ್ ಮುಂತಾದ ಪ್ರಸಿದ್ಧ ವೈಜ್ಞಾನಿಕ ಪತ್ರಿಕೆಗಳಿಂದ ಆಯ್ದು ಪ್ರಕಟಿಸಲಾಗುತ್ತಿತ್ತು.

	ಮಾಧ್ಯಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಎಟಕುವಂತಿದ್ದ ಈ ಪತ್ರಿಕೆಯ ಲೇಖನಗಳು ನಿರ್ದುಷ್ಟ ವಿಷಯ ನಿರೂಪಣೆ, ಭಾಷಾಶುದ್ಧತೆ ಮತ್ತು ಶೈಲಿಯ ದೃಷ್ಟಿಯಿಂದ ಒಳ್ಳೆಯ ಮಾದರಿಗಳಾಗಿ ದ್ದುದರಿಂದ ಅವು ಮೈಸೂರು ಪ್ರದೇಶದ ಶಾಲೆಗಳ ಕನ್ನಡ ಪಠ್ಯಪುಸ್ತಕಗಳನ್ನು ಪ್ರವೇಶಿಸಿ ಹತ್ತಿಪ್ಪತ್ತು ವರ್ಷ ಕಾಲ ವಿದ್ಯಾರ್ಥಿಗಳಿಗೆ ಚಿರಪರಿಚಿತವಾಗಿದ್ದುವು. ಪತ್ರಿಕೆಗೆ ಪ್ರೋತ್ಸಾಹ ದೊರಕದೆ ಹನ್ನೆರಡು ಸಂಚಿಕೆಗಳನ್ನು ಪ್ರಕಟಿಸಿದ ಅನಂತರ ನಿಂತುಹೋಯಿತು.  	
				(ಜೆ.ಆರ್.ಎಲ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ